ʼರಾಜಮೌಳಿಯ ಭೇಟಿಯಾಗದೇ ಪರಾರಿ ಆಗಿದ್ದ ತರುಣ್ ಸುಧೀರ್ʼ

ತರುಣ್ ಸುಧೀರ್ (Tarun Sudhir) ಕನ್ನಡದ ಯಶಸ್ವಿ ಸಿನಿಮಾ ನಿರ್ದೇಶಕ. ಅವರು ನಿರ್ದೇಶನ ಮಾಡಿರುವ ‘ಚೌಕ’, ‘ರಾಬರ್ಟ್’, ‘ಕಾಟೇರ’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸಿನಿಮಾ ನಿರ್ಮಾಪಕರೂ ಆಗಿರುವ ತರುಣ್ ಸುಧೀರ್, ಇತ್ತೀಚೆಗಷ್ಟೆ ನಿರ್ಮಾಣ ಮಾಡಿರುವ ‘ಏಳುಮಲೆ’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತರುಣ್ ಸುಧೀರ್ ನಟರಾಗಿಯೂ ಹೆಸರು ಮಾಡಿದ್ದಾರೆ. ತರುಣ್ ಸುಧೀರ್, ಕಚೇರಿಯಲ್ಲಿ ಹಲವು ಖ್ಯಾತ ನಿರ್ದೇಶಕರ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಅವರು ನಿರ್ದೇಶಕ ರಾಜಮೌಳಿಯ ದೊಡ್ಡ ಅಭಿಮಾನಿ ಸಹ. ಆದರೆ ಅವರನ್ನು ಭೇಟಿ ಆಗುವ ಅವಕಾಶ ಬಂದಾಗ ಸ್ಥಳದಿಂದ ಓಡಿ ಹೋಗಿದ್ದರಂತೆ ತರುಣ್.

‘ಏಳುಮಲೆ’ ಸಿನಿಮಾದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿರುವ ತರುಣ್ ಸುಧೀರ್ ಈ ವಿಷಯ ಹಂಚಿಕೊಂಡಿದ್ದಾರೆ. ‘ರನ್ನ’ ಸಿನಿಮಾದ ಶೂಟಿಂಗ್ ವೇಳೆ ಹೈದರಾಬಾದ್ನಲ್ಲಿ ಶೂಟಿಂಗ್ ಮಾಡುವಾಗ ರಾಜಮೌಳಿ ಅವರು ಸಹ ಅಲ್ಲಿಯೇ ಬೇರ್ಯಾವುದೋ ಶೂಟಿಂಗ್ಗೆಂದು ಬಂದಿದ್ದರಂತೆ. ಆ ವೇಳೆ ಸುದೀಪ್ ಅವರು ತರುಣ್ ಸುಧೀರ್, ‘ರನ್ನ’ ಸಿನಿಮಾ ನಿರ್ದೇಶಿಸುತ್ತಿದ್ದ ನಂದ ಮತ್ತು ಸಹ ನಿರ್ಮಾಪಕರಾದ ಸುಧಾಕರ್ ಎಂಬುವರನ್ನು ರಾಜಮೌಳಿಯವರ ಭೇಟಿ ಮಾಡಿಸಲು ಕರೆದುಕೊಂಡು ಹೋಗಿದ್ದರಂತೆ. ರಾಜಮೌಳಿಯ ದೊಡ್ಡ ಅಭಿಮಾನಿ ಆಗಿದ್ದ ತರುಣ್ ಬಹಳ ಖುಷಿಯಲ್ಲಿ ಸುದೀಪ್ ಅವರ ಜೊತೆಗೆ ಹೋದರಂತೆ.
ಅದರಂತೆ ಮೊದಲಿಗೆ ಸುದೀಪ್ ಅವರು ಹೋಗಿ ರಾಜಮೌಳಿ ಬಳಿ ಮಾತನಾಡಿ, ಮೊದಲಿಗೆ ನಂದ ಅವರನ್ನು ಪರಿಚಯಿಸಿ, ‘ಅತ್ತಾರಿಂಟಿಕಿ ದಾರೇದಿ’ ರೀಮೇಕ್ ಮಾಡುತ್ತಿದ್ದೀವಿ, ಇವರು ನಿರ್ದೇಶಕರು ಈ ಹಿಂದಿನ ಇವರ ಕೆಲ ಸಿನಿಮಾಗಳು ಚೆನ್ನಾಗಿ ಹೋಗಿವೆ ಎಂದು ಪರಿಚಯಿಸಿದರಂತೆ. ಸುಧಾಕರ್ ಅವರನ್ನು ಸಹ ರಾಜಮೌಳಿ ಅವರಿಗೆ ಪರಿಚಯಿಸಿ, ನಿರ್ಮಾಪಕರು ಇತ್ಯಾದಿ ಏನೋ ಹೇಳಿದರಂತೆ. ಅವರ ಬಳಿಕ ತರುಣ್ ಸುಧೀರ್ ಅವರನ್ನು ಕರೆಯಬೇಕು ಎನ್ನುವಷ್ಟರಲ್ಲಿ ತರುಣ್ ಅವರು ಅಲ್ಲಿಂದ ಪರಾರಿ ಆಗಿದ್ದರಂತೆ.
ತರುಣ್ ಅವರು ಹೇಳಿರುವಂತೆ, ಅಣ್ಣ ನಂದನನ್ನು ನಿರ್ದೇಶಕ ಎಂದು ಪರಿಚಯ ಮಾಡಿಸಿದರು. ಆದರೆ ನನ್ನನ್ನು ಪರಿಚಯ ಮಾಡಿಸಲು ಅವರಿಗೆ ಯಾವ ಕಾರಣವೂ ಇರಲಿಲ್ಲ. ಪರಿಚಯ ಮಾಡಿಸಿದ್ದರೂ ಏನೆಂದು ಹೇಳುತ್ತಿದ್ದರು, ‘ನಂದ ಕಿಶೋರ್ ತಮ್ಮ’ ಎಂಬುದು ಬಿಟ್ಟರೆ ನನ್ನ ಪರಿಚಯ ಹೇಳಲು ಯಾವ ಕಾರಣವೂ ಇರಲಿಲ್ಲ. ನಾನು ಯಾವ ಸಾಧನೆಯನ್ನೂ ಮಾಡಿರಲಿಲ್ಲ. ಹಾಗಾಗಿ ಅಂದು ನಾನು ಅವರಿಗೆ ಹೇಳದೆ ಕೇಳದೆ ಅಲ್ಲಿಂದ ಹೊರಟು ಬಿಟ್ಟೆ. ಹೋಗಿ ರಾಜಮೌಳಿ ಅವರ ಕ್ಯಾರವ್ಯಾನ್ನ ಹಿಂದೆ ನಿಂತುಬಿಟ್ಟಿದ್ದೆ’ ಎಂದು ತರುಣ್ ಹೇಳಿಕೊಂಡಿದ್ದಾರೆ.
ಆದರೆ ಈಗ ತರುಣ್ ಸುಧೀರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕ ಸಹ. ಅವರು ನಿರ್ದೇಶಿಸಿರುವ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ನಿರ್ಮಾಣ ಮಾಡಿರುವ ‘ಗುರು ಶಿಷ್ಯರು’ ಮತ್ತು ‘ಏಳುಮಲೆ’ ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಸೈಮಾ, ಫಿಲಂ ಫೇರ್ ಪ್ರಶಸ್ತಿಗಳನ್ನು ಸಹ ಅವರು ಪಡೆದುಕೊಂಡಿದ್ದಾರೆ.